ತಿರುಬಾನಿ
	ಪ್ರವಹಿಸುತ್ತಿರವ ತರಲಗಳಲ್ಲಿ (ಫ್ಲೂಯಿಡ್ಸ್) ಅಡಕವಾಗಿರುವ ಚಲನಶಕ್ತಿಯನ್ನು ಆವರ್ತಕ ಯಾಂತ್ರಿಕ ಸಾಮಥ್ರ್ಯವನ್ನಾಗಿ (ರೋಟರಿ ಮೆಕ್ಯಾನಿಕಲ್ ಪವರ್) ಮಾರ್ಪಡಿಸಲು ಬಳಸುವ ಯಂತ್ರ (ಟರ್ಬೈನ್). ಮೂಲತಃ ಶೀರ್ಷ ಇಲ್ಲವೇ ಸಂಮರ್ದರೂಪದಲ್ಲಿದ್ದ ಶಕ್ತಿ ತಿರುಬಾನಿಯಲ್ಲಿನ ಹಲವಾರು ಸ್ತಬ್ಧ ಹಾಗೂ ಚಲಿಸುತ್ತಿರುವ ಅಲಗುಗಳ ಮೂಲಕ ಹಾದು ವೇಗ ಶಕ್ತಿಯಾಗಿ ಪರಿವರ್ತನೆಗೊಳ್ಳುವುದು. ತರಲವೇಗದ ಪರಿಮಾಣ (ಮ್ಯಾಗ್ನಿಟ್ಯೂಡ್) ಮತ್ತು ದಿಶೆಗಳಲ್ಲಿನ ಬದಲಾವಣೆಗಳು ಆವರ್ತಿಸುತ್ತಿರುವ ಅಲಗುಗಳ ಮೇಲೆ ಸ್ಪರ್ಶಕೀಯ ಬಲಗಳನ್ನು ಬೀರಿ ತಿರುಗುತ್ತಿರುವ ರೋಟರ್ ಮೂಲಕ ಯಾಂತ್ರಿಕ ಸಾಮಥ್ರ್ಯವನ್ನು ಉತ್ಪಾದಿಸುವಂತೆ ಮಾಡಲಾಗುತ್ತದೆ. ತಿರುಬಾನಿಗಳಲ್ಲಿ ಸರ್ವಸಾಧಾರಣವಾಗಿ ಉಪಯೋಗಿಸುವ ತರಲಗಳೆಂದರೆ ಉಗಿ ಬಿಸಿವಾಯು ಯಾ ದಹನೋತ್ಪನ್ನಗಳು ಮತ್ತು ನೀರು. ಫಾಸಿಲ್ ಇಂಧನವನ್ನು ಉರಿಸುವ ಬಾಯಿಲರುಗಳಿಂದ ಇಲ್ಲವೇ ನ್ಯೂಕ್ಲಿಯರ್ ರಿಯಾಕ್ಟರುಗಳಿಂದ ದೊರೆಯುವ ಉಗಿಯನ್ನು ವೈದ್ಯುತ ಸಾಮಥ್ರ್ಯೋತ್ಪಾದನೆ ನೌಕಾಸಂಚಾಲನೆ ಮತ್ತು ಯಾಂತ್ರಿಕ ಚಾಲನೆಗೆ ವ್ಯಾಪಕವಾಗಿ ಬಳಸಲಾಗುತ್ತಿದೆ. ಆವೇಗ (ಇಂಪಲ್ಸ್). 

ಚಿತ್ರ-1

ಪ್ರತಿಕ್ರಿಯೆ ಅಥವಾ ಇವೆರಡರ ಮಿಶ್ರಣ - ಇವನ್ನು ಆಧರಿಸಿದ ತತ್ತ್ವದ ರೀತ್ಯ ತಿರುಬಾನಿಗಳು ತರಲಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುತ್ತವೆ. ಚಿತ್ರ (1)ರಲ್ಲಿ ಆವೇಗ ತತ್ತ್ವವನ್ನು ನಿದರ್ಶಿಸಿದೆ. ಕುದಿಪಾತ್ರೆಯಲ್ಲಿನ ಉನ್ನತ ಸಂಮರ್ದದ ಮತ್ತು ನಿಮ್ನವೇಗದ ತರಲವನ್ನು ಸ್ತಬ್ಧಸೂಸುಬಾಯಿಯ ಮೂಲಕ ನಿಮ್ನ ಸಂಮರ್ದ ಮತ್ತು ಉನ್ನತ ವೇಗದಲ್ಲಿ ವ್ಯಾಕೋಚಿಸಲು ಬಿಡಲಾಗುವುದು. ಹೀಗೆ ಸ್ಥಿರ ಸಂಮರ್ದದಲ್ಲಿ ಪ್ರವಹಿಸುತ್ತಿರುವ ತರಲಧಾರೆಯ ವೇಗವನ್ನು ತಿರುಗುತ್ತಿರುವ ರೋಟರಿನ ಅಲಗುಗಳು ಕಡಿಮೆಗೊಳಿಸಿ ಚಲನಶಕ್ತಿಯನ್ನು (ವೇಗ) ಯಾಂತ್ರಿಕ ಶಕ್ತಿಯಾಗಿ ಮಾರ್ಪಡಿಸುತ್ತವೆ. ಪ್ರತಿಕ್ರಿಯೆಯ ತತ್ತ್ವವನ್ನು ಚಿತ್ರ (2) ರಲ್ಲಿ ಕಾಣಿಸಿದೆ. ಚಲಿಸುತ್ತಿರುವ ರೋಟರಿಗೆ ಸೂಸುಬಾಯಿಗಳನ್ನು ಲಗತ್ತಿಸದೆ. ಸೂಸುಬಾಯಿಯನ್ನು ಕುರಿತಂತೆ ತರಲದ ವೇಗೋತ್ಕರ್ಷ ಪ್ರತಿಕ್ರಿಯೆಯ ವಿರುದ್ಧ ದಿಶೆಯ ಬಲವೊಂದನ್ನು ರೋಟರಿನ ಮೇಲೆ ಉತ್ಪಾದಿಸುತ್ತದೆ. ರೋಟರಿನ ಮೇಲಣ ಬಲ ಮತ್ತು ವೇಗದ ಸಂಯುಕ್ತ ಫಲವಾಗಿ ಯಾಂತ್ರಿಕ ಸಾಮಥ್ರ್ಯ ಉಂಟಾಗುವುದು. 

	ತಿರುಬಾನಿಯಲ್ಲಿ ಬಳಸುವ ತರಲದ ಬಗೆಗಳನ್ನು ಅನುಸರಿಸಿ ಮೂರು ವಿಧಗಳಂಟು : ಅನಿಲ ತಿರುಬಾನಿ, ಉಗಿ ತಿರುಬಾನಿ, ಜಲ ತಿರುಬಾನಿ. 

ಚಿತ್ರ-2

	ಅನಿಲ ತಿರುಬಾನಿ : ಇಲ್ಲಿ ಬಳಸುವ ಇಂಧನ ಎಣ್ಣೆ. ಇವರಲ್ಲಿ ವಿಶೇಷ ತೆರನಾದ ಒಂದು ಅಕ್ಷವಾಹಿ ಸಂಪೀಡಕ (ಕಂಪ್ರೆಸ್) ಯಂತ್ರ ಇದೆ. ಹಲವು ಹಂತಗಳಿರುವ ಈ ಯಂತ್ರ ಪರಿಸರದಿಂದ ವಾಯುವನ್ನು ಸೇದಿಕೊಂಡು ಅದರ ಒತ್ತಡವನ್ನು 50 ಪೌಂಡು/ ಚ.ಅಂ.ವರೆಗೆ ಹೆಚ್ಚಿಸುವುದು. ಮುಂದೆ ಈ ಅಧಿಕ ಸಂಮರ್ದಿತ ವಾಯುದಾಹಕ ಕೋಷ್ಠಗಳನ್ನು ಪ್ರವೇಶಿಸುವುದು. ಅಲ್ಲಿರುವ ಎಣ್ಣೆಯ ಜ್ವಾಲಕಗಳ(ಬರ್ನರ್ಸ್) ಸೂಕ್ಷ್ಮರಂಧ್ರದ ಮೂಲಕ ಎಣ್ಣೆ ರಂಧ್ರದಿಂದ ಹೊರಬರುವಾಗ ತುಂತುರು ಹನಿಯಾಗಿ ಮಾರ್ಪಟ್ಟು ಹೂಗೆಯ ರೂಪದಲ್ಲಿರುವುದು. ಇದರ ಧಾರೆ ವಾಯುವಿನೊಡನೆ ಚೆನ್ನಾಗಿ ಬೆರೆಯುತ್ತದೆ. ಒಳಗಿನ ಉಷ್ಣದ ದೆಸೆಯಿಂದ ಎಣ್ಣೆ ಹತ್ತಿಕೊಂಡು ಉರಿಯುತ್ತ ಬೆಂಕಿಯ ಜ್ವಾಲೆ ಉಂಟಾಗುತ್ತದೆ. ಆಗ ಉಷ್ಣೋತ್ಪತ್ತಿ ಆಗಿ ಒಳಗಿನ ಅನಿಲದ ಉಷ್ಣಪರಿಮಾಣ ಬಲು ಮೇಲೇರುವುದು. ಉಷ್ಣಪರಿಮಾಣವನ್ನು ಒಂದು ಪರಿಮಿತಿಯ ಒಳಗೆ ಹಿಡಿದಿಡುವುದು ಅಗತ್ಯ. ಇಲ್ಲವಾದರೆ ತಿರುಬಾನಿಯ ಅಲಗುಗಳು ಸುಟ್ಟುಹೋಗುವುವು. ಆದ್ದರಿಂದ ವಾಯುವನ್ನು ಅಧಿಕ ಪ್ರಮಾಣದಲ್ಲಿ ಉಪಯೋಗಿಸಬೇಕಾಗುತ್ತದೆ. ಬಳಿಕ ಅಧಿಕ ಸಂಮರ್ದದ ವಾಯು ಮತ್ತು ಹೊಗೆಯ ಮಿಶ್ರಣ ತಿರುಬಾನಿಯನ್ನು ಪ್ರವೇಶಿಸಿ ಅಲಗಿನ ಬಳೆಗಳ ಮೂಲಕ ಹರಿಯುತ್ತದೆ. ಆ ವೇಳೆಯಲ್ಲಿ ಅದರ ಘನಗಾತ್ರ (ವಾಲ್ಯೂಮ್) ನಿರಂತರವಾಗಿ ವ್ಯಾಕೋಚಿಸುತ್ತ ಸಂಮರ್ದ ರೂಪದಲ್ಲಿದ್ದ ಶಕ್ತಿ ಚಲನಶಕ್ತಿಯಾಗಿ ಮಾರ್ಪಡುತ್ತದೆ. ಇದು ತಿರುಬಾನಿಯ ಅಲಗುಗಳನ್ನು ತಿರುಗಿಸಿದಾಗ ಚಾಲಕ ದಂಡ ಆವರ್ತಿಸಲು ತೊಡಗುವುದು. ಈ ಪ್ರಕಾರ ಶಕ್ತಿಯನ್ನು ಕಳೆದುಕೊಂಡ ಅನಿಲ ನಿಷ್ಕಾಸದ್ವಾರದ ಮೂಲಕ ಹೊರ ಸಾಗುತ್ತದೆ. ತಿರುಬಾನಿ ಆವರ್ತಿಸುವ ವೇಗವನ್ನು ಎಣ್ಣೆಯ ಸರಬರಾಜಿನಲ್ಲಿ ಹೆಚ್ಚು ಕಡಿಮೆಮಾಡುವುದರಿಂದ ನಿಯಂತ್ರಿಸಬಹುದು. ಇಂಥ ಯಂತ್ರೋಪಕರಣಗಳು ಉತ್ಪಾದಿಸುವ ಅಶ್ವಸಾಮಥ್ರ್ಯದ ಒಂದು ಗಣನೀಯ ಭಾಗ ಸಂಪೀಡಕವನ್ನು ನಡೆಸುವುದಕ್ಕೆ ವೆಚ್ಚವಾಗುತ್ತದೆ. ಉಳಿದ ಅಶ್ವಸಾಮಥ್ರ್ಯ ವಿದ್ಯುಜ್ಜನಕಗಳನ್ನು ಚಾಲೂ ಮಾಡಲು ಉಪಯೋಗವಾಗುವುದು. 

	ಸ್ಪೋಟಕ ಕ್ರಿಯೆಗಳುಳ್ಳ ತಿರುಬಾನಿ : ಇದರಲ್ಲಿ ಅನಿಲದ ಘನಗಾತ್ರ ನಿಯತವಾಗಿರುವ ರೀತಿಯಲ್ಲಿ ಇಂಧನ ಸುಡಲ್ಪಡುವುದು. ಇದರ ದಾಹಕ ಕೋಷ್ಠಗಳು ಸಂಪೀಡಕದಿಂದ ಅದುಮಲ್ಪಟ್ಟ ವಾಯುವಿನಿಂದ ತುಂಬಿಕೊಳ್ಳುತ್ತವೆ. ಇವುಗಳ ಕವಾಟಗಳು ಮುಚ್ಚಿಕೊಂಡ ಬಳಿಕ ಬೇರೆ ರೇಚಕದ ಸಹಾಯದಿಂದ ಎಣ್ಣೆ ಕೋಷ್ಠದೊಳಗೆ ನೂಕಲ್ಪಡುವುದು. ಅಲ್ಲಿ ಎಣ್ಣೆ ಮತ್ತು ವಾಯು ಮಿಶ್ರಣ ವಿದ್ಯುತ್ ಕಿಡಿಯ ಸಹಾಯದಿಂದ ಸ್ಫೋಟಿಸುತ್ತದೆ. ಆಗ ಘನಗಾತ್ರ ಸ್ಥಿರವಾಗಿರದಿದ್ದರೂ ಒತ್ತಡ ವಾಯುಮಂಡಲದ ಒತ್ತಡಕ್ಕಿಂತ 10,15ರಷ್ಟು ಪಟ್ಟು ಒಮ್ಮೆಗೇ ಹೆಚ್ಚವುದು. 

	ಉಗಿ ತಿರುಬಾನಿ : ದಾಹಕ ಕೋಷ್ಠಗಳಲ್ಲಿ ವಾಯುವನ್ನು ತುಂಬಲು ಬೇಕಾಗುವ ಸಂಪೀಡಕಗಳನ್ನು ನಡೆಸಲು ಉಗಿ ತಿರುಬಾನಿಗಳನ್ನು ಉಪಯೋಗಿಸುವರು. ಇಂಥವುಗಳಿಗೆ ಬೇಕಾದ ಉಗಿಯನ್ನು ತಿರುಬಾನಿಯಿಂದ ಹೊರದೂಡಲ್ಪಟ್ಟ ನಿಷ್ಕಾಸ ವಾಯುವಿನಲ್ಲಿರುವ ಉಷ್ಣವನ್ನು ಉಪಯೋಗಿಸಿ ಉತ್ಪಾದಿಸಬಹುದು. ದಾಹಕ ಕೋಷ್ಠದೊಳಗಿರುವ ವಾಯುವಿನ ಹೆಚ್ಚು ಒತ್ತಡದಿಂದಾಗಿ ಅದರ ಒಂದು ಕವಾಟ ತೆರೆಯುವುದು. ಇದರ ಮೂಲಕ ಹೊಗೆ ಮತ್ತು ವಾಯುಮಿಶ್ರಣ ತಿರುಬಾನಿಯೊಳಗೆ ಪ್ರವೇಶಿಸುವುದು; ಕವಾಟದ ಮೂಲಕ ಹರಿಯುವಾಗ, ಅನಿಲದಲ್ಲಿರುವ ಶಕ್ತಿಯೆಲ್ಲ ಚಲನಶಕ್ತಿಯಾಗಿ ಬದಲಾಗುತ್ತದೆ. ಇದನ್ನು ತಿರುಬಾನಿಯ ಅಲಗುಗಳು ಹೀರಿಕೊಂಡು ಚಾಲಕದಂಡ ಸುತ್ತುವಂತೆ ಮಾಡುತ್ತವೆ. ತಿರುಬಾನಿಯಿಂದ ಹೊರಬಂದ ನಿಷ್ಕಾಸ ವಾಯುವನ್ನು ಉಷ್ಣಕಗಳ ಮೂಲಕ ಹಾಯುವಂತೆ ಮಾಡುವರು. ಇವು ನಿಷ್ಕಾಸ ವಾಯುವಿನಲ್ಲಿರುವ ಉಷ್ಣವನ್ನು ಉಪಯೋಗಿಸಿಕೊಂಡು ನೀರನ್ನು ಉಗಿಯಾಗಿ ವಾಡುವುವು. ಇದರ ನೆರವಿನಿಂದ ಸಂಪೀಡಕಗಳನ್ನು ನಡೆಸುವ ಉಗಿ ತಿರುಬಾನಿಗಳು ಕೆಲಸಮಾಡುತ್ತವೆ. ಈ ತರಹದ ಜೋಡಣೆ ಫಲದಾಯಕವಾದದ್ದು. ಏಕೆಂದರೆ ತಿರುಬಾನಿ ಉತ್ಪಾದಿಸುವ ಶಕ್ತಿ ಹೊರಗಿನ ಕೆಲಸಕ್ಕೆ ಉಪಯೋಗವಾಗುತ್ತದೆ. 

	ಜಲ ತಿರುಬಾನಿ; ಹಿಂದಿನ ಕಾಲದಲ್ಲಿ ಜಲಚಕ್ರಗಳನ್ನು ಉಪಯೋಗಿಸಿ ನೀರಿನಿಂದ ಶಕ್ತಿಯನ್ನು ಪಡೆಯುತ್ತಿದ್ದರು. ಇವು ನೀರಿನ ಭಾರದಿಂದ ಇಲ್ಲವೇ ನೀರು ಹರಿಯುವಾಗ ಉಂಟಾಗುವ ಪ್ರಚೋದನೆ ಬಲದಿಂದ ತಿರುಗುತ್ತಿದ್ದವು. ನಿಧಾನವಾಗಿ ಚಲಿಸುವ ಯಂತ್ರಗಳನ್ನು ಓಡಿಸುವುದಕ್ಕೆ ಮಾತ್ರ ಇವುಗಳ ಉಪಯೋಗವಿರುತ್ತಿತ್ತು. ಆದರೆ ಈಗಿನ ಬಹು ವೇಗ ಚಲಿಸುವ ವಿದ್ಯುಜ್ಜನಕ ಮುಂತಾದ ಆಧುನಿಕ ಯಂತ್ರಗಳನ್ನು ಓಡಿಸಲು ಜಲಚಕ್ರಗಳು ಅಸಮರ್ಥವಾಗಿವೆ. ಅದೂ ಅಲ್ಲದೆ ನೀರಿನ ಎತ್ತರ (ಜಲಶೀರ್ಷ) ಹೆಚ್ಚಾಗಿರುವ ಕಡೆಗಳಲ್ಲಿ ಜಲಚಕ್ರಗಳು ಕೆಲಸಕ್ಕೆ ಬಾರವು. ತಿರುಬಾನಿಗಳಾದರೋ ಬಲು ಕಡಿಮೆ ಆಥವಾ ಹೆಚ್ಚು ವೇಗದಲ್ಲಿ ಸುತ್ತಬಲ್ಲವು. ಜಲಶೀರ್ಷ 0.5 ಮೀಟರಿನಿಂದ 2,000 ಮೀಟರುಗಳ ವರೆಗೆ ಯಾವ ಎತ್ತರವೇ ಆಗಲಿ ಆದಕ್ಕೆ ತಕ್ಕ ತಿರುಬಾನಿಗಳು ಇವೆ. ಇವುಗಳ ಆವರ್ತನ ವೇಗವನ್ನು ಬಲು ನಿಖರವಾಗಿ ನಿಯಂತ್ರಿಸಬಹುದು. ನಿಧಾನವಾಗಿ ಸುತ್ತುತ್ತಿದ್ದ ಹಳೆಯ ಜಲಚಕ್ರಗಳು ಉತ್ಪಾದಿಸುತ್ತಿದ್ದ ಗರಿಷ್ಠ ಅಶ್ವಸಾಮಥ್ರ್ಯ 100 ಆಗಿದ್ದರೆ ಇಂದು ವೇಗವಾಗಿ ತಿರುಗುವ ಆಧುನಿಕ ಜಲ ತಿರುಬಾನಿಗಳ ಅಶ್ವಸಾಮಥ್ರ್ಯ 80,000ಕ್ಕೂ ಮಿಕ್ಕಿ ಉಂಟು. ಈ ಕಾರಣಗಳಿಂದ ಜಲಚಕ್ರಗಳ ಬಳಕೆ ತಪ್ಪಿಹೋಗಿ ಅವುಗಳ ಸ್ಥಾನವನ್ನು ಜಲತಿರುಬಾನಿಗಳು ಆಕ್ರಮಿಸಿವೆ. 

	ಕ್ರಿಯಾ ತತ್ತ್ವ : ಚಾಲಕ ಚಕ್ರದ ಅಂಚಿನ ಸುತ್ತಲೂ ಇರುವ ಭದ್ರಪಡಿಸಿದ ಬಾಗಿದ ಆಲಗುಗಳನ್ನು ನೀರಿನ ಪ್ರವಾಹ ತಾಕಿದಾಗ ಚಕ್ರ ಅಲಗುಗಳು ನೀರಿನ ಹರಿವಿನ ದಿಶೆಯನ್ನೂ ವೇಗದ ಪ್ರಮಾಣವನ್ನೂ ಬದಲಾಯಿಸುವುದರಿಂದ ಅವುಗಳ ಮೇಲೆ ಬಲ ಪ್ರಯೋಗವುಂಟಾಗಿ ಚಕ್ರ ಆವರ್ತಿಸಲು ತೊಡಗುತ್ತದೆ. ಇದರಿಂದ ಯಾಂತ್ರಿಕ ಶಕ್ತಿ ಉತ್ಪಾದನೆ ಆಗುವುದು. ನೀರಿನ ಸ್ಥಾಯೀ ಒತ್ತಡವೊಂದೇ ತಿರುಬಾನಿಯನ್ನು ಚಾಲೂ ಮಾಡಲಾರದು. 

	ವರ್ಗೀಕರಣ : ಜಲ ತಿರುಬಾನಿಗಳನ್ನು ಎರಡು ವರ್ಗವಾಗಿ ವಿಂಗಡಿಸಿದೆ; 1 ಪ್ರತಿಕ್ರಿಯೆಯ ಅಥವಾ ಒತ್ತಡದ ತಿರುಬಾನಿ, 2 ಆವೇಗದ ಜಲತಿರುಬಾನಿ,

	1 ಪ್ರತಿಕ್ರಿಯಾ ಮಾದರಿಯ ತಿರುಬಾನಿಯಲ್ಲಿ ಒತ್ತಡವುಳ್ಳ ನೀರು ಚಾಲಕ ಚಕ್ರವನ್ನು ಪ್ರವೇಶಿಸಿ ಅಲಗುಗಳ ಮೇಲೆ ಹರಿಯುವುದು. ಆ ವೇಳೆ ನೀರಿನ ಒತ್ತಡ ಕಡಿಮೆಯಾಗಿ ವೇಗ ವರ್ಧಿಸುತ್ತದೆ. ನೀರು ಚಕ್ರದಿಂದ ಹೊರಬಂದಾಗ ಅದರ ಒತ್ತಡ ಪೂರ್ತಿ ಇಳಿದು ಹೋಗಿ ವಾಯುಮಂಡಲದ ಒತ್ತಡಕ್ಕೆ ಸಮವಾಗಿರುವುದು. ತಿರುಬಾನಿಯೊಳಗೆ ಒತ್ತಡದ ನೀರು ಪ್ರವೇಶಿಸುವುದರಿಂದ ಅದು ನೀರಿನಿಂದ ತುಂಬಿಕೊಂಡಿತ್ತದೆ. ಆದ್ದರಿಂದ ಪ್ರತಿಕ್ರಿಯಾ ಮಾದರಿಯ ತಿರುಬಾನಿಗಳು ಕೊನೆಯ ಸೆಳವಿನ ನೀರಿನೊಳಗೆ ಮುಳುಗಿಕೊಂಡಿದ್ದಾಗ್ಯೂ ಕೆಲಸಮಾಡಬಲ್ಲವು. ಪ್ರತಿಕ್ರಿಯೆ ತಿರುಬಾನಿಗಳನ್ನು ಜಲಪಾತದ ಕೆಳಭಾಗದಿಂದ 10 ಮೀಟರುಗಳಷ್ಟು ಮೇಲೆ ಸ್ಥಾಪಿಸಿದಾಗ್ಯೂ ತಿರುಬಾನಿ ನೀರನ್ನು ಎಳೆತದ ನಾಳದಲ್ಲಿ ವಿಸರ್ಜಿಸುವುದರಿಂದ ತಿರುಬಾನಿಯ ಮೇಲಿನ ಜಲಶಿರ ಸ್ವಲ್ಪವೂ ಕಡಿಮೆ ಆಗದೆ ಜಲಪಾತದ ಶಿರ ಮತ್ತು ಕೊನೆಯ ಸೆಳವಿನ ನೀರಿನ ಮಟ್ಟದ ನಡುವಿನ ಅತಂರಕ್ಕೆ ಸಮವಾಗಿರುತ್ತದೆ. 

	ಪ್ರತಿಕ್ರಿಯಾ ಮಾದರಿಯಲ್ಲಿ ನಾಲ್ಕು ಬಗೆಗಳಿವೆ : ಮೊದಲನೆಯದು ಹೊರಮುಳ ಹರಿವಿನ ತಿರುಬಾನಿ. ಇದರಲ್ಲಿ ಚಾಲಕ ದಂಡದ ಮೇಲೆ ಹತ್ತಿಸಿರುವ ಚಾಲಕ ಚಕ್ರ ಉರುಳೆ ಆಕಾರದಲ್ಲಿದೆ. ಚಕ್ರದ ಅಂಚಿನ ಸುತ್ತಲೂ ಬಾಗಿದ ಅಲಗುಗಳಿವೆ (ಚಿತ್ರ 3). ನೀರು ಮೊದಲು ಚಕ್ರದ ಕೇಂದ್ರವನ್ನು ಪ್ರವೇಶಿಸಿ ಹೊರಮುಖವಾಗಿ ಹರಿಯುತ್ತ ಸ್ಥಿರವಾಗಿರುವ ಅರೀಯ ಮಾರ್ಗದರ್ಶಿ ಅಲಗುಗಳ ಮೂಲಕ ಚಲಿಸುವ ಅಲಗುಗಳೊಳಗೆ ಹೋಗುತ್ತದೆ. 

ಚಿತ್ರ-3

ಸ್ಥಿರ ಮಾರ್ಗದರ್ಶಿ ಅಲಗುಗಳು ನೀರು ಸರಿಯಾದ ಒಂದು ಕೋನದಲ್ಲಿ ಚಲಿಸುವ ಅಲಗುಗಳನ್ನು ಹೋಗುವಂತೆ ನೀರಿನ ಚಲನೆಯನ್ನು ನಿಯಂತ್ರಿಸುವುವು. ಈ ಪ್ರವೇಶ ಕೋನದಲ್ಲಿ ವ್ಯತ್ಯಾಸವಾದರೆ ನೀರಿನ ಹರಿವಿನಲ್ಲಿ ಪ್ರಕ್ಷುಬ್ಧತೆ ಏರ್ಪಟ್ಟು ಶಕ್ತಿ ಹ್ರಾಸವಾಗುವುದು. ಅನಂತರ ನೀರು ಚಲಿಸುವ ಅಲಗುಗಳ ಮೂಲಕ ಹರಿದು ಚಾಲಕ ಚಕ್ರ ಸುತ್ತುವಂತೆ ಮಾಡಿ ಚಕ್ರದ ಹೊರ ಅಂಚಿನಲ್ಲಿ ವಿಸರ್ಜಿತವಾಗುವುದು. ಇಂಥ ತಿರುಬಾನಿಯನ್ನು ಕೊನೆಯ ಸೆಳವಿನ ನೀರಿನೊಳಗೆ ಮುಳುಗುವಂತೆ ಅಥವಾ ಎಳೆತ ನಾಳದ ಸಹಾಯದಿಂದ ಜಲಪಾತದ ತಳದಿಂದ ಮೇಲಿರುವಂತೆ ಸ್ಥಾಪಿಸಬಹುದು. ತಿರುಬಾನಿನ ಹರಿಯುವ ನೀರಿನ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡುವುದಕ್ಕೋಸ್ಕರ ಉರುಳೆ ಆಕಾರದ ನೀರು ಬಾಗಿಲು ಸ್ಥಿರ ಅಲಗುಗಳಿಗೂ ಚಲ ಅಲಗುಗಳಿಗೂ ಮಧ್ಯೆ ಇರುತ್ತದೆ. ಇಂಥ ನಿಯಂತ್ರಣದಲ್ಲಿ ಶಕ್ತಿ ಹ್ರಾಸವಾಗುವುದರಿಂದ ಇದು ಅಷ್ಟು ತೃಷ್ತಿಕರ ವ್ಯವಸ್ಥೆಯಲ್ಲ. ಹೊರಮುಖ ಹರಿವಿನ ಪ್ರತಿಕ್ರಿಯಾ ತಿರುಬಾನಿಯ ಮುಖ್ಯ ದೋಷವೆಂದರೆ ಆವರ್ತನವೇಗ ಸ್ವಲ್ಪ ಹೆಚ್ಚಾದಾಗ ಇಲ್ಲಿ ಅಪಕೇಂದ್ರಕ ಬಲವೂ ಹೆಚ್ಚಾಗಿ ಇನ್ನೂ ವರ್ಧಿಸಿ ಬಲು ಬೇಗ ಹತೋಟಿ ಮೀರುವಂತೆ ಚಕ್ರ ಸುತ್ತಲು ಪ್ರಾರಂಭಿಸುತ್ತದೆ. ಹೀಗಾಗಿ ಯಂತ್ರದ ಕಾರ್ಯಾಚರಣೆ ಅಸ್ಥಿರ. ಹೊರಮುಖ ಹರಿವಿನ ತಿರುಬಾನಿಗಳನ್ನು ಫೋರ್ನೇರಾನ್ ಎಂಬಾತ 1828ರಲ್ಲಿ ಉಪಜ್ಞಿಸಿದ. ಈ ಮಾದರಿಯ ತಿರುಬಾನಿಗಳನ್ನೇ ನಯಾಗರಾ ಜಲಪಾತದಲ್ಲಿ ಮೊದಲು ವಿದ್ಯುತ್ ಶಕ್ತಿಯ ಉತ್ಪಾದನೆಗೆ ಉಪಯೋಗಿಸಿದರು. 

	ಎರಡನೆಯ ಒಳಮುಖ ಹರಿವಿನ ಜಲಯಂತ್ರ : ಈ ಮಾದರಿಯ ತಿರು ಬಾನಿಯಲ್ಲಿ ನೀರು ಮೊದಲು ಚಕ್ರದ ಹೊರ ಅಂಚಿನಲ್ಲಿ ಪ್ರವೇಶಿಸಿ ಅರದ ದಿಶೆಯಲ್ಲಿ ಒಳಮುಖವಾಗಿ ಕೇಂದ್ರದ ಕಡೆಗೆ ಹರಿದು ಅಕ್ಷೀಯ ದಿಸೆಯಲ್ಲಿ ವಿಸರ್ಜಿತವಾಗುತ್ತದೆ. ಇದರ ಹೊರತು ಮಿಕ್ಕೆಲ್ಲ ವಿಷಯಗಳಲ್ಲಿಯೂ ಇದು ಹೊರಮುಖ ಹರಿವಿನ ಯಂತ್ರವನ್ನು ಹೋಲುತ್ತದೆ. ಚಕ್ರ ಸುತ್ತುವಾಗ ನೀರಿನ ಮೇಲೆ ನಿವೇಶಿತವಾಗುವ ಅಪಕೇಂದ್ರಕ ಬಲ, ನೀರು ಹರಿಯುವ ದಿಶೆಗೆ ವಿರುದ್ಧವಾಗಿರುವುದರಿಂದ, ವೇಗ ವರ್ಧಿಸಿದಾಗ ನೀರಿನ ಹರಿವಿನ ಪ್ರಮಾಣ ಕುಗ್ಗಿ. ಉತ್ಪಾದಿತ ಶಕ್ತಿ ಕಡಿಮೆಯಾಗುವುದು. ಆದ್ದರಿಂದ ಚಕ್ರ ಹತೋಟಿ ತಪ್ಪಿ ಓಡದಂತೆ ತಡೆಯುವುದು. ಈ ತಿರುಬಾನಿಯನ್ನು 1849ರಲ್ಲಿ ಫ್ರಾನ್ಸಿಸ್ ಎಂಬಾತ ಉಪಜ್ಞಿಸಿದ. 1851ರಲ್ಲಿ ತಾಮ್‍ಸನ್ ಎಂಬಾತ ಇದರ ರಚನೆಯನ್ನು ಉತ್ತಮೀಕರಸಿ ತಿರುಗಾಣಿಗಳ ಮೇಲೆ ತಿರುಗುವ ಮಾರ್ಗದರ್ಶಿ ಅಲಗುಗಳ ನೆರವಿನಿಂದ, ನೀರಿನ ಹರಿವು ನಿಯಂತ್ರಿತವಾಗುವಂತೆ ಏರ್ಪಡಿಸಿದ. 

	ಮೂರನೆಯ ಅಕ್ಷೀಯ ಹರಿವಿನ ತಿರುಬಾನಿ : ಇದರಲ್ಲಿ ಮಾರ್ಗದರ್ಶಿ ಅಲಗುಗಳು ಚಕ್ರದ ಮೇಲ್ಭಾಗದಲ್ಲಿರುತ್ತವೆ. ನೀರು ಚಕ್ರದ ಸಮತಳ ಭಾಗದಲ್ಲಿ ಪ್ರವೇಶಿಸಿ ಅಕ್ಷಕ್ಕೆ ಸಮಾಂತರವಾಗಿ ಹರಿಯುತ್ತದೆ. 	ನಾಲ್ಕನೆಯದು ಮಿಶ್ರ ಹರಿವಿನ ತಿರುಬಾನಿ : ಇದು ಒಳಮುಖ ಹರಿವಿನ ಮತ್ತು ಅಕ್ಷೀಯ ಹರಿವಿನ ತಿರುಬಾನಿಗಳ ಸಂಯುಕ್ತ ಎಂದು ಹೇಳಬಹುದು. ಚಾಲಕ ಚಕ್ರದ ಅಲಗುಗಳು ಎರಡು ದಿಶೆಗಳಲ್ಲಿ ತಿರುಗಿಕೊಂಡಿರುತ್ತವೆ. ನೀರು ಅರೀಯ ದಿಸೆಯಲ್ಲಿ ಪ್ರವೇಶಿಸಿ ಚಕ್ರದ ಕೇಂದ್ರದ ಸಮೀಪ ಅಕ್ಷೀಯ ದಿಸೆಯಲ್ಲಿ ವಿಸರ್ಜಿತವಾಗುತ್ತದೆ. 

	ಆವೇಗ ಮಾದರಿಯ ತಿರುಬಾನಿನಲ್ಲಿ ಸೂಸುಬಾಯಿಯಂತೆ ಕೆಲಸ ಮಾಡುವ ಮಾರ್ಗದರ್ಶಿ ಅಲಗುಗಳಿವೆ. ನೀರು ಈ ಅಲಗುಗಳಲ್ಲಿ ಹರಿಯುವಾಗ ಅದರ ಒತ್ತಡದ ಶಕ್ತಿಯೆಲ್ಲವೂ ವೇಗದ ಶಕ್ತಿಯಾಗಿ ಮಾರ್ಪಾಡುತ್ತದೆ. ತಿರುಬಾನಿಯೊಳಗಿನ ನೀರಿನ ಒತ್ತಡ ವಾಯುಮಂಡಲದ ಒತ್ತಡಕ್ಕೆ ಸಮವಾಗಿದ್ದು ಚಕ್ರದೊಳಗೆ ಪೂರ್ತಿ ನೀರು ತುಂಬಿರುವುದಿಲ್ಲ. ಆದ್ದರಿಂದ ಆವೇಗ ಮಾದರಿಯನ್ನು ಜಲಶಿರ ಕಡಿಮೆಯಾಗದಂತೆ ಜಲಪಾತದ ಕೆಳಭಾಗದಲ್ಲಿಯೇ ಸ್ಥಾಪಿಸಬೇಕು. ಮೇಲೆ ವಿವರಿಸಿದ ಈ ಬಗೆಯ ತಿರುಬಾನಿನಲ್ಲಿ (i) ಹೊರಮುಖ ಹರಿವು. (ii) ಒಳಮುಖ ಹರಿವು. (iii) ಅಕ್ಷೀಯ ಹರಿವು ಎಂದು ಮೂರು ಪ್ರಭೇದಗಳುಂಟು. ಈ ತಿರುಬಾನಿಗಲ ಒಳಗೆ ನೀರು ಸೇರದಂತೆ ಜಲಪಾತದ ತಳಕ್ಕೆ ಸ್ವಲ್ಪ ಮೇಲೆ ಇವನ್ನು ಸ್ಥಾಪಿಸಬೇಕಾಗುತ್ತದೆ. ಆದ್ದರಿಂದ ಯಂತ್ರದ ಮೇಲಿನ ಜಲಶಿರ ಕಡಿಮೆ ಆಗುತ್ತದೆ. ಜಲಪಾತದ ಎತ್ತರ ಅಧಿಕವಾಗಿದ್ದರೆ ಈ ನಷ್ಟ ಗಣನೀಯವಲ್ಲ. ಕಡಿಮೆ ಎತ್ತರದ ಜಲಪಾತವಾಗಿದ್ದರೆ ಜಲಶಿರ ನಷ್ಟ ಅಲ್ಪವಲ್ಲವಾದ್ದರಿಂದ ಅಂಥ ಸಂದರ್ಭಗಳಲ್ಲಿ ಆವೇಗ ತಿರುಬಾನಿಗಳನ್ನು ಉಪಯೋಗಿಸಲಾಗದು. ಆವೇಗ ತಿರುಬಾನಿಗಳಲ್ಲಿ ನೀರಿನ ಹರಿವನ್ನು ಹೆಚ್ಚು ಶಕ್ತಿ ನಷ್ಟವಾಗದಂತೆ ನಿಯಂತ್ರಿಸಬಹುದು. 

ಚಿತ್ರ-4

ಯಂತ್ರದೊಳಗಿನ ನೀರಿನ ಒತ್ತಡ ವಾಯುಮಂಡಲದ ಒತ್ತಡವೇ ಆಗಿರುವುದರಿಂದ ಚಾಲಕ ಚಕ್ರದ ಪರಧಿಯ ಸುತ್ತಲೂ ನೀರು ಪ್ರವೇಶಿಸಬೇಕಾಗಿಲ್ಲ. ಆದ್ದರಿಂದ ಒಂದು ತಿರುಬಾಗಿಲಿನ ಮೂಲಕ ಹರಿವನ್ನು ಮಾತ್ರ ನಿಯಂತ್ರಿಸಬಹುದು. ಈ ಬಾಗಿಲು ತಿರುಗಿದಾಗ ಕೆಲವು ಅಲಗುಗಳೊಳಗಿನ ನೀರಿನ ಹರಿವನ್ನು ಮಾತ್ರ ತಡೆದುಬಿಡುತ್ತವೆ. ಮಿಕ್ಕ ಅಲಗುಗಳೊಳಗಿನ ಹರಿವನ್ನು ಅಡ್ಡಿಪಡಿಸುವುದಿಲ್ಲ. ಆದ್ದರಿಂದ ಶಕ್ತಿ ಹ್ರಾಸವಾಗದಂತೆ ನಿಯಂತ್ರಣ ಸಾಧ್ಯ. ಇಂಥ ಅರೀಯ ಹರಿವಿನ ಭಾಗಶಃ ಪ್ರವೇಶದ ಆವೇಗ ತಿರುಬಾನಿಗಳನ್ನು 1850ರಲ್ಲಿ ಜಿರಾರ್ಡ್ ಎಂಬಾತ ಬಳಕೆಗೆ ತಂದ. ಅಕ್ಷೀಯ ಹರಿವಿನ ಆವೇಗ ತಿರುಬಾನಿಯಲ್ಲಿ ಅಪಕೇಂದ್ರಕ ಬಲ ನೀರಿನ ಹರಿವಿನ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ. ಮಿಕ್ಕೆಲ್ಲ ವಿಷಯಗಳಲ್ಲಿಯೂ ಇದು ಅರೀಯ ಹರಿವಿನ ಮೇಲೆ ಯಂತ್ರದಂತೆಯೇ ಕೆಲಸ ಮಾಡುತ್ತದೆ. ಮುಖ್ಯ ಪ್ರಭೇದಗಳು (ಚಿ) ಜಿರಾರ್ಡ್ ತಿರುಬಾನಿ, (b) ಜಾನ್‍ವಾಲ್ ತಿರುಬಾನಿ. (ಛಿ) ಪೆಲ್ಪನ್ ಚಕ್ರ . ಕೊನೆಯದರ ರಚನೆಯನ್ನು ಕೆಳಗೆ ವಿವರಿಸಿದೆ. 

	ಫ್ರಾನ್ಸಿಸ್ ತಿರುಬಾನಿ : ಇದು ಒಳಮುಖ ಹರಿವಿನ ಅರೀಯ ಪ್ರತಿಕ್ರಿಯಾ ಮಾದರಿಯದು. ಫ್ರಾನ್ಸಿಸ್ ಎಂಬಾತ ಉಪಜ್ಞಿತ ಪ್ರಥಮ ಒಳಮುಖ ಹರಿವಿನ ತಿರುಬಾನಿ. ಇದರಲ್ಲಿ ವಿಸರ್ಜಿತವಾಗುವ ನೀರು ಅರೀಯ ದಿಶೆಯಲ್ಲಿ ಹರಿಯುತ್ತಿದ್ದರೆ ದಕ್ಷತೆ ಗರಿಷ್ಠ ಪ್ರಮಾಣದಲ್ಲಿರುವುದು. 

	ಪೆಲ್ಟನ್ ಚಕ್ರ : ಇದು ಒಂದು ವಿಶಿಷ್ಟ ರೀತಿಯ ಅಕ್ಷೀಯ ಹರಿವಿನ ಆವೇಗ ತಿರುಬಾನಿ. ಈ ಯಂತ್ರವನ್ನು ನೀರಿನ ಎತ್ತರ ಅಧಿಕವಾಗಿರುವ ಕಡೆಗಳಲ್ಲಿ ವಿಶೇಷವಾಗಿ ಉಪಯೋಗಿಸುತ್ತಾರೆ. ಸಮಗ್ರ ದಕ್ಷತೆ 84% ರಷ್ಟಿರುವ ಅತ್ಯುತ್ತಮ ಆವೇಗ ತಿರುಬಾನಿ ಇದು. 

ಚಿತ್ರ-5

 ಸೂಸುಮೂತಿಯ ಮೂಲಕ ಒತ್ತಡದ ನೀರು ಹರಿದು ಹೊರಬಂದರೆ ಬಹಳ ವೇಗವಾಗಿ ಚಲಿಸುವ ಒಂದು ಧಾರೆ ಏರ್ಪಡುತ್ತದೆ. ಪೆಲ್ಟನ್ ಚಕ್ರದಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಸೂಸು ಮೂತಿಗಳಿರಬಹುದು. ಈ ಧಾರೆ ಜೋಡಿ ಬಟ್ಟಲಿನ ಆಕಾರದಲ್ಲಿರುವ ಅಲಗುಗಳಿಗೆ ವೇಗವಾಗಿ ಬಡಿಯುತ್ತದೆ (ಚಿತ್ರ 5). 

ಚಿತ್ರ-6

ಆಗ ಚಾಕುವಿನ ಬಾಯಿಯಂತಿರುವ ಅಲಗಿನ ಏಣು ಧಾರೆಯನ್ನು ಎರಡು ಭಾಗವಾಗಿ ಕತ್ತರಿಸುತ್ತದೆ. ಧಾರೆಯ ಎರಡು ಭಾಗಗಳು ಅಲಗಿನ ಎರಡು ಬಟ್ಟಲುಗಳೊಳಗೆ ಅಕ್ಷೀಯ ದಿಸೆಯಲ್ಲಿ ಹರಿದು ಹೊರ ಬರುತ್ತವೆ (ಚಿತ್ರ 6). ಅಕ್ಷೀಯ ದಿಸೆಯಲ್ಲಿ ಯಾವ ನೂಕು ಬಲವೂ ಉಂಟಾಗದಿರುವುದೇ ಈ ವ್ಯವಸ್ಥೆಯ ಪ್ರಯೋಜನ. ನೀರು ಹಿಮ್ಮೊಗವಾಗಿ ವಿಸರ್ಜಿತವಾಗುವಂತೆ ಬಟ್ಟಲುಗಳ ಆಕಾರವನ್ನು ರೂಪಿಸಿರುತ್ತದೆ. ಸೂಸುಮೂತಿಯೊಳಗಿರುವ ಭರ್ಜಿಯಾಕಾರದ ಸೂಜಿ ಕವಾಟದ ನೆರವಿನಿಂದ ಶಕ್ತಿಯ ಅಪವ್ಯಯ ಆಗದಂತೆ ನೀರಿನ ಹರಿವನ್ನು ನಿಯಂತ್ರಿಸಬಹುದು. ಈಗೀಗ ದೊಡ್ಡ ಗಾತ್ರದ ಪೆಲ್ಟನ್ ಚಕ್ರಗಳು ನಿರ್ಮಿತವಾಗುತ್ತಿವೆ. 46,000 ಅಶ್ವಸಾಮಥ್ರ್ಯ ಉತ್ಪಾದಿಸುವ ಏಕಚಕ್ರದ ದ್ವಿಧಾರೆಯ 700 ಮೀಟರು ಜಲಶಿರದಲ್ಲಿ ಕೆಲಸ ಮಾಡುವ ಪೆಲ್ಟನ್ ಚಕ್ರವಿದೆ. ಇದರ ಆವರ್ತನೆ ವೇಗ ಮಿನಿಟಿಗೆ 360 ಸುತ್ತುಗಳು. ಪ್ರತಿಯೊಂದು ಧಾರೆಯ ವ್ಯಾಸ 18 ಸೆಂ.ಮೀ. ತಿರುಬಾನಿಯ ಮೇಲಿನ ಹೊರೆ ತತ್ ಕ್ಷಣ ಕಡಿಮೆಯಾದರೆ ಸೂಸುಮತಿಗೂ ಅಲಗುಗಳಿಗೂ ನಡುವೆ ಒಂದು ಪಟ್ಟಿ ಅಡ್ಡ ಬಂದು ಧಾರೆ ಅಲಗಿಗೆ ತಗಲದಂತೆ ಅದರ ಪಥವನ್ನು ತಿರುಗಿಸಿಬಿಡುತ್ತದೆ. ಅನಂತರ ಸೂಜಿ ಕವಾಟ ನಿಧಾನವಾಗಿ ಚಲಿಸಿ, ಪೆನ್ ಸ್ಟಾಕ್ ಕೊಳವೆಗಳಲ್ಲಿ ಜಲಬಡಿಗೆ ಉಂಟಾಗದಂತೆ ನೀರಿನ ಹರಿವನ್ನು ನಿಯಂತ್ರಿಸುತ್ತದೆ. ಉತ್ಪಾದಿತ ಶಕ್ತಿಗೂ ಹೊರೆಗೂ ಸಮತೋಲವೇರ್ಪಟ್ಟ ಮೇಲೆಯೇ ಅಡ್ಡಪಟ್ಟಿ ಹಿಂದೆ ಸರಿಯುವುದು. ತಿರುಬಾನಿಯ ಮೇಲಿನ ನೀರಿನ ಎತ್ತರ ಹಚ್ಚಾದಷ್ಟೂ ಚಕ್ರ ವೇಗವಾಗಿ ಸುತ್ತಬೇಕಾಗುತ್ತದೆ. ಏಕೆಂದರೆ ಯಂತ್ರ ದಕ್ಷತೆ ಧಾರೆಯ ವೇಗ ಮತ್ತು ಅಲಗಿನ ವೇಗದ ಅನುಪಾತವನ್ನು ಅವಲಂಬಿಸಿದೆ. ಚಕ್ರದ ವೇಗ ಹೆಚ್ಚಿದರೆ ಸುತ್ತಮುತ್ತಲಿನ ವಾಯುರೋಧವೂ ಹೆಚ್ಚುವುದು. ವಾಯು ರೋಧದಿಂದ ಉಂಟಾಗುವ ಶಕ್ತಿಹ್ರಾಸ ಉತ್ಪಾದಿತಶಕ್ತಿಯ ಸುಮಾರು 5% ರಷ್ಟಿರುವುದು. ಪೆಲ್ಟನ್ ಚಕ್ರಗಳು ಆಧುನಿಕ ವಿದ್ಯುಜ್ಜನಕಗಳಿಗೆ ಮೂಲ ಚಾಲಕÀಗಳಾಗಿರುವುದರಿಂದ ಅವುಗಳ ವೇಗ ನಿಯಂತ್ರಕ್ಕೆ ವಿಶೇಷ ಲಕ್ಷ್ಯ ಕೊಡಬೇಕಾಗುವುದು. ಎಣ್ಣೆಯ ಒತ್ತಡದಿಂದ ಕೆಲಸ ಮಾಡುವ ಸ್ವಯಂಚಲಿ ಕ್ರಮಕಾರಕಗಳು ಆವರ್ತನೆ ವೇಗವನ್ನು ಬಲು ಸೂಕ್ಷ್ಮ್ಮವಾಗಿ ನಿಯಂತ್ರಿಸುತ್ತವೆ. 													(ಬಿ.ಪಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ